Sunday, 18 September 2016

ಕವನ - 10 - ನಾ ಹೆಂಗ ಕಾಲಕ್ಕೆ ಬರಲವ್ವ -


ಬಿತ್ತಾಗ ಬರಲಿಲ್ಲ
ಮೊಳೆತಾಗ್ಲೂ ಸುಳಿವಿಲ್ಲ
ಅಳಿದುಳಿದ ಫಸಲೆಲ್ಲಾ
ಕೈ ಸೇರೊ ಹೊತ್ತಲ್ಲಿ
ಬರಬರನೆ ಬಿದ್ಯಲ್ಲೋ ಮಳೆರಾಯ
ಬೆಳೆಯೆಲ್ಲ ಮಣ್ಣಾಯ್ತೊ ಮಳೆರಾಯ

ವನಹಸಿರು ಕಳುವಾಯ್ತು
ಬಿಸಿ ಏರುಪೇರಾಯ್ತು
ಬೀಸೊ ಗಾಳೀಗಂತು
ದಿಕ್ಕೆಟ್ಟು ತಪ್ಪೋಯ್ತು
ನಾ ಹೆಂಗ ಕಾಲಕ್ಕೆ ಬರಲವ್ವ
ಯಾರ ಹೊಣೆ ನೀನೆ ಹೇಳವ್ವ

ಬಂದರೆ ಅತಿವೃಷ್ಟಿ
ಇಲ್ಲ ಅನಾವೃಷ್ಟಿ
ಮನೆಯೊಳಗ ನುಗ್ಗಿ
ನಗರವೇ ಮುಳುಗಿ
ಯಾಕಿಂಥ ಕಡು ಕಷ್ಟ ಕೊಡುತೀಯೊ
ಯಮಲೋಕಕೆ ಯಾಕ ದೂಡುತೀಯೊ

 ಕೆರೆಯಾಗ ಮನೆಕಟ್ಟಿ
ಕಪ್ಪು ಟಾರನು ಮೆತ್ತಿ
ಇಂಗಿಸುವ ಉಸುಕನ್ನು
ಮಂಗಮಾಯವಗೊಳಿಸಿ
ಬಿದ್ದುನಾನೆತ್ತೋಗಲೇ ಅಮ್ಮ
ಎದ್ದು ತಿದ್ದುವ ಸರತಿ ನಿಮದಮ್ಮ




No comments:

Post a Comment