Sunday, 18 September 2016

ಕವನ - 10 - ನಾ ಹೆಂಗ ಕಾಲಕ್ಕೆ ಬರಲವ್ವ -


ಬಿತ್ತಾಗ ಬರಲಿಲ್ಲ
ಮೊಳೆತಾಗ್ಲೂ ಸುಳಿವಿಲ್ಲ
ಅಳಿದುಳಿದ ಫಸಲೆಲ್ಲಾ
ಕೈ ಸೇರೊ ಹೊತ್ತಲ್ಲಿ
ಬರಬರನೆ ಬಿದ್ಯಲ್ಲೋ ಮಳೆರಾಯ
ಬೆಳೆಯೆಲ್ಲ ಮಣ್ಣಾಯ್ತೊ ಮಳೆರಾಯ

ವನಹಸಿರು ಕಳುವಾಯ್ತು
ಬಿಸಿ ಏರುಪೇರಾಯ್ತು
ಬೀಸೊ ಗಾಳೀಗಂತು
ದಿಕ್ಕೆಟ್ಟು ತಪ್ಪೋಯ್ತು
ನಾ ಹೆಂಗ ಕಾಲಕ್ಕೆ ಬರಲವ್ವ
ಯಾರ ಹೊಣೆ ನೀನೆ ಹೇಳವ್ವ

ಬಂದರೆ ಅತಿವೃಷ್ಟಿ
ಇಲ್ಲ ಅನಾವೃಷ್ಟಿ
ಮನೆಯೊಳಗ ನುಗ್ಗಿ
ನಗರವೇ ಮುಳುಗಿ
ಯಾಕಿಂಥ ಕಡು ಕಷ್ಟ ಕೊಡುತೀಯೊ
ಯಮಲೋಕಕೆ ಯಾಕ ದೂಡುತೀಯೊ

 ಕೆರೆಯಾಗ ಮನೆಕಟ್ಟಿ
ಕಪ್ಪು ಟಾರನು ಮೆತ್ತಿ
ಇಂಗಿಸುವ ಉಸುಕನ್ನು
ಮಂಗಮಾಯವಗೊಳಿಸಿ
ಬಿದ್ದುನಾನೆತ್ತೋಗಲೇ ಅಮ್ಮ
ಎದ್ದು ತಿದ್ದುವ ಸರತಿ ನಿಮದಮ್ಮ




ಕವನ - 9 - ಚಳಿಗವನಗಳು


1. ಮುದುಡಿ  ಮುದುಡಿ
ಮೈ ,ಮನಸು
ಎರಡೂ
ಮರಗಟ್ಟಿ ಮರುಗಿದೆ

ಬಿಡದೆ ತಡಿಯದೆ
ಬರುವ
ಜಡಿ ಮಳೆ ಕಷ್ಟಗಳಿಗೆ
ಬೆಚ್ಚನೆಯ ಭಾನು
ಬಯಸಿದೆ
ಕಾಯಾ ಮನಸಾ
ತಪಿಸಿದೆ
  
2. ನಡುಗಿಸುವ ಚಳಿ
ಖಾರದ ಬಿಸಿ ತಿನಿಸುಗಳ
ಮೆಲ್ಲುವ ಖಯಾಲಿ,
ಸುಡುವ ಕಾಫೀಲಿ
ಏಳುವ ಹಬೆಯೂ
ಹೀರಿದ ಮೇಲೆ
ಖಾಲಿ ಕಪ್ಪಿನ ಬಿಸಿಯೂ
ಅಪ್ಪುತ
ಕೈ ಕಾಯಿಸಿಕೊಳ್ಳುವ
ಪಾಡು
ಹಲ್ಲಿನ ಕಟಕಟ ತಾಳಕೆ
ಚಳಿಚಳಿ ತಾಳೆನು ಹಾಡು


 3)
ಎರಡೆರಡು
ಹೊದಿಕೆಗಳ ಗೂಡಲಿ
ಗುಬ್ಬಿಯಾಗಿ

ಮೆತ್ತನೆ ದಿಂಬನು
ಗಟ್ಟಿಯಾಗಿ ಅಪ್ಪತಲೀ
ಬೆಚ್ಚಗಾಗಿ

ಅಮ್ಮನ ಮಡಿಲು
ಅಜ್ಜಿಯ ಬಾಚುವ ಬೆರಳು
ನೆನಪಾಗಿ

ಬಾಲ್ಯದ ಒಲೆಯು
ನಿಗಿನಿಗಿ ಉರಿಯುತಾ
ಕಣ್ಮುಂದೆ ಹರಿದಾಡಿ

ಮಳೆಯ ಜೋಗುಳ
ಧೀರ್ಘ ರಾತ್ರಿಯು
ನಿದ್ದೆಗೆ ವರವಾಗಿ

ಬರುವ ಮಳೆರಾಯ
ಕೊರೆವ ಚಳಿಗಾಳಿಗೆ

ಏನೆನ್ನಲಿ 

ಕವನ - 8 - ಇಂಗದ ರಕ್ತದಾಹ


ಅಲ್ಲಾಹು ಇದ್ದಿದ್ದರೆ ಇದ ಮಾಡಗೊಡುತ್ತಿರಲಿಲ್ಲ
ಜೀಸಸ್ ...ಪಾಪಿಗಳನ್ನು ಕ್ಷಮಿಸಿದ
ತನ್ನ ಮಕ್ಕಳಿಗೇಕೆ ರಕ್ಷಣೆಯನ್ನೀಯಲಿಲ್ಲ
ಕೋಟಿಕೋಟಿ ಹಿಂದೂ ದೇವತೆಗಳಿಗೆ
ಭಾರತದಲ್ಲೇ ಬಿಲಿಯನ್ ಸಮಸ್ಯೆಗಳು
 ಕ್ಷಮಿಸಿ.......ಅವರಿಗೆ ಬಿಡುವಿಲ್ಲ

ಖುರಾನ್  ದೇವರೆ ನೀನು
ದಯೆಗೇ ದಯಸ್ವರೂಪಿಯಂತೆ
ನಿನ್ನ ಕೃಪಾಕಟಾಕ್ಷ ಬಯಸಿದವರಿಗೆ
ಮೃತರಿಗೂ ಜೀವ ನೀಡುವಿಯಂತೆ

ನಿನಗೆ ಬಾಗಿ ಜಗವೆಲ್ಲ ಈಗ ಪ್ರಾರ್ಥಿಸುವುದು
ನೀನೊಬ್ಬನೇ ದಿಕ್ಕೆಂದು ನಂಬುವುದು
ಬರುವುದೋ ಹೋದ ಜೀವ
ಅಳಿಸುವೆಯಾ ಕಳಕೊಂಡವರ ನೋವ

ನಾನೇಕೆ ಸತ್ತೆನೆಂದೇ ತಿಳಿಯದವ
ಪ್ರಶ್ನೆ ಹುಟ್ಟಲೂ ಮುಂಚೆ ಪ್ರಾಣ ಪಕ್ಷಿ
ಹಾರಿ ಹೋಗಿ ಎಲ್ಲರನ್ನು ತೊರೆದವ
ಅವನ ಅರೆತೆರದ ಅಕ್ಷಿ ಕುಕೃತ್ಯದ ಸಾಕ್ಷಿ

ದೇವರ ಹೆಸರಲ್ಲಿ ಮೃಗದ ರಕ್ತದಾಹ
ಮನುಕುಲದ ನಾಶಕ್ಕೆ ಹರಡುತಿಹ
ಮತೀಯ ಮತ್ತಿನ ಮೋಹ
ಹಿರಿಯರ ತ್ಯಾಗಕ್ಕೆ ವ್ಯವಸ್ಥಿತ ದ್ರೋಹ

ಇನ್ನೆಷ್ಟು ದಿನ ಅವರ ಹಟ
ಬುಡ ಸಹಿತ ಕೀಳಲು
ಮತ್ತೆ ಮೊಳೆಯದಿರಲು
ಒಗ್ಗಟ್ಟಿನ ಹೆಜ್ಜೆ ಬೇಕು ದಿಟ

ವಿಶ್ವ ಯುದ್ಧ ನಡೆಯಲಿ
ಉಗ್ರರ ವಿರುದ್ಧ
ಇದಕೂ ಮೊದಲಿರಲಿ

ನಾವೆಲ್ಲ ಒಂದೆ ಎಂಬ ಮಾತಿಗೆ ಬದ್ಧ

ಕವನ - 7 - ಗೆಳತಿ...ನಿನಗೊಂದು ಪತ್ರ



ಆಕಸ್ಮಿಕವೋ ಅದೃಷ್ಟವೋ
ಆಗ ನೀ ಬಂದೆ ಬಳಿಗೆ
ಯಾರೂ ತೋರಿಸದ ಹಾಗೆ
ಸ್ನೇಹವ ರುಚಿಸಿದೆ ನನಗೆ

ಮೊದಲು ಅರಿವಾಗಲಿಲ್ಲ ಮನಸಿಗೆ
ಬರುತ್ತ ನಿನ್ನ ಬಿಡಲಾರದಾದೆ
ನೀ ಹಚ್ಚಿಕೊಳ್ಳುವ ಬಗೆ ಮುಗ್ಧ ನಗೆ
ಎಲ್ಲಕ್ಕೂ  ನಾ ಮರುಳಾದೆ

 ಶುಭಾಶಯ ಇರಲಿ ಗ್ರೀಟಿಂಗ್ ಕಾರ್ಡಿರಲಿ
ಹೊಸಬಟ್ಟೆ ಧರಿಸಿರಲಿ
ಮೊದಲ ಫೋನ್ ಕಾಲ್ ಇರಲಿ
ಎಲ್ಲವೂ ಆಶಿಸುತ್ತಿದ್ದೆವು ಮೊದಲಿರಲಿ

ಶಾಲೆಗೆ ನೀ ಬರದಿರೆ ನಾನೂ ಇಲ್ಲ
ನಾ ಬಂದರೆ ನೀ ತಪ್ಪುವುದಿಲ್ಲ
ಒಂದೆ ಬಣ್ಣದ ಉಡುಪು
ಒಂದೆ ರೀತಿಯ ಜಡೆ ಒನಪು
ಕೊಂಡರೂ ಒಂದೇ
ತಿಂದರೂ ಒಂದೆ
ನೆನಪಿದೆಯಾ ನಮ್ಮಿಬ್ಬರ ನೋಡಿ
ಶಿಕ್ಷಕರೆಂದಿದ್ದರು ಇಬ್ಬರೂ ಕೂಡಿ
ಹಾಕಿಕೊಳ್ಳಿರಿ ಬೆನ್ನಿಗೆ
ಒಂದು ಲೋಹದ ಬೆಸುಗೆ

ಹಬ್ಬಕ್ಕೆ ನಿಮ್ಮನೆಯ ಉಸ್ಲಿಗಾಗಿ
ಒಮ್ಮೊಮ್ಮೆ ನಮ್ಮನೆ ಖಾರದ ಸಾಂಬಾರಿಗಾಗಿ
ಇಬ್ಬರೂ ಚಪ್ಪರಿಸುತ್ತಿದ್ದ  ದಿನಗಳಿಗಾಗಿ
ಖುಷಿಪಡುವೆ ಮಗುವಂತೆ... ನೆನಪಾಗಿ

ಕ್ಲಾಸಿಗೆ ಮೊದಲಿರುತ್ತಿದ್ದ ನಾವು
ಒಂದು ಸಾರಿ ಗಣಿತದಲ್ಲಿ ಸೊನ್ನೆ ಪಡೆದೆವು
ಬೆಂಚ್ ಹತ್ತಿ ನಿಂತುಚರಿತ್ರೆ ಸೃಷ್ಠಿಸಿದೆವು
ದುಃಖದ ಮುಖವಾಡ ಹೊತ್ತಿದ್ದೆವು
ಎಷ್ಟೊತ್ತು ನಾಟಕವಾಡುವೆವು
ಒಬ್ಬರಿಗೊಬ್ಬರು ಮುಖನೋಡಿಕೊಂಡೆವು
ಉಕ್ಕಿಬಂದ ನಗುವನ್ನು ತಡೆಯಲಾರದಾದೆವು
ಉರಿದ ಶಿಕ್ಷಕರು ಹೊರಗೆ ನಿಲ್ಲಿಸಿದಾಗ
ಆದ ಅಪರೂಪದ ಅನುಭವವ
ಈಗಲೂ ಮರೆಯಲಾರೆವು

ನಿನ್ನಲ್ಲಿರುವ ಕಲೆ ಹಲವು ಬಗೆ
ನೀನಿರುವೆಡೆಯೆಲ್ಲ ಹಾಸ್ಯಹೊನಲಿನ ಬುಗ್ಗೆ
ಥೇಟ್! ಅನುಕರಿಸುವ ಕಲಾವಿದೆ
ಗಿಳಿಮಾತನು ಕೇಳುತ್ತಿರಲೇಬೇಕು ಅನಿಸುತ್ತದೆ

ಹಾಡಿದರೆ ಹಾಯೆನಿಸುವ
ಮಧುರಕಂಠ ಹೊಂದಿರುವ
ಸುಮನಸಿನ ರೂಪಸಿ
ಕಮಲಗಣ್ಣಿನ ಅರಸಿ

ನಿನ್ನೊಂದಿಗಿನ ಕ್ಷಣಗಳು
ಸಂತಸದ ದಿನಗಳು
ಕಲಿತೆ ಕೊಡುವುದನು
ಅರಿತೆ ಪ್ರೀತಿಸುವುದನು
ನೀ ತಂದ ದೊಡ್ಡ ಉಡುಗೊರೆ
ನಿನ್ನ ಮಿಸ್ಸಮ್ಮನ ಪರಿಚಿಯಿಸಿ
ಜೀವನದಲ್ಲಿ ತಂದೆ ತಿರುವಿನಗೆರೆ

ನೋವು ನಲಿವುಗಳ ಸಂಗಾತಿ
ಸದಾ ಜೊತೆಯಿರೆಂದು ಕೋರುವ ನಿನ್ನ ಗೆಳತಿ


ಕವನ - 6 - ಬಣ್ಣಕ್ಕೂ ಇಟ್ಟರೆ....? ಕುಮ್ಮಕ್ಕು



ಅಂಧ ದ್ವೇಷದ ವೈಖರಿ ನೋಡಿ
ಪ್ರಾಣಿ ಹರಾಜು ನಡೀತಿದೆ ಹೊಡೆದಾಡಿ
ಆಕಳು ಹಿಂದುಗಳ ಪಕ್ಷ
ಅಜವು ಇಸ್ಲಾಮರ ಸಮಕ್ಷ

ಮಂದಿರದಲ್ಲಿ ಹಿಂದುಗಳು
ಮಸೀದಿಯಲ್ಲಿ ಮುಸ್ಲಿಮರು
ಆಗಿರುತ್ತಿದ್ದ ಕಾಲ ಹೋಗಿ
ಭಾರತ ಹರಿದು ಇಬ್ಭಾಗವಾಗಿ
ಮನುಷ್ಯರೇ ಇಲ್ಲದಂತಾಗಿ

ಅವರು ನಾರಿಫಲಕ್ಕೂಇವರೂ ಖರ್ಜೂರಕ್ಕೂ ಮುಗಿಬಿದ್ದುದ ಕಂಡು
ಈಗ ಚಿಂತೆಯಾಗಿದೆ ಮರ ಎಲೆ ಕಡ್ಡಿ ಗಳಿಗೂ
ನಮ್ಮ ಸರದಿಯೆಂದು? ...ಎಂದು

ಈ ವರಸೆ ಎಲ್ಲಿವರೆಗೂ ಅಂದರೆ
ಬಣ್ಣಗಳಿಗೂ ಬಂತು ತೊಂದರೆ
ಹಸಿರಾಯಿತು ಮುಸಲ್ಮಾನ
ಹಿಂದುಬಳಿದುಕೊಂಡ ಕೇಸರೀನ

ಆ ದಿನ ದೂರದಲ್ಲೆಲ್ಲೂ ಇಲ್ಲ
ಇಸ್ಲಾಂಪರ ಹಸಿತರಕಾರಿಯೆಲ್ಲ
ಬರೀ ಟಮೋಟ ಬಿಟ್ಟರೆ ಗಜ್ಜರಿ
ಹಿಂದುಗಳ ಹಿಸ್ಸೆಗೆ ಉಳಿಯುವುದಲ್ಲ

ಖರೆ ಮೇಲಿನದೆಲ್ಲ
ಆದ್ರೆ ಒಂದು ಹೊಳೀತಿಲ್ಲ
ಪಪ್ಪಾಯಕಲ್ಲಂಗಡಿ
ಸೇರಬೇಕು ಯಾರ ಗಡಿ?
ಈ ಬಡಪಾಯಿಯೋ ಹೊರಗೆ ಮುಸಲ್ಮಾನ
ಒಳಗೆ ಒಬ್ಬ ಹಿಂದು ಇದ್ದಾನ......
ಇವರು ಗೋಮಾಂಸದ ಪಾರ್ಟಿ ಮಾಡುವರಂತೆ
ಅವರು ಮಸೀದಿ ಮುಂದೆ ಹಂದಿ ಸಮಾರಾಧನೆಯಂತೆ
ಅಲ್ಲೆಲ್ಲೊ ಒಲೆಯೇ ಉರಿಯದ ಮನೆಗಳಿವೆಯಂತೆ
ಇಲ್ಲಿ ಬಾಯಿ ಬಡಕೊಳ್ಳುವವರು
ಅಲ್ಲಿ  ಈ ಖಾದ್ಯ ಬಡಿಸಿ ಬಂದರೆ ಪುಣ್ಯವಂತೆ
ತ್ವರೆಮಾಡಿ

ಕವನ - 5 - ಕರ್ಮೋಡ


ಕರ್ಮೋಡ ಕವಿದಾಗ
ಕಡುಕತ್ತಲಾದಾಗ

ಕಣ್ಣು ಕಂಡಲ್ಲೆಲ್ಲ
ಕಪ್ಪು ಕಳೆ ಇಳೆಗೆಲ್ಲ

ಕೆಳಗಿಳಿದ ಕರಿಮೇಘ
ಕಾರುತ್ತ ಕಾರುತ್ತ

ಕೆಳತೋಟಕೆಲ್ಲ
ಕಾಯುತ್ತ ಕಾಯುತ್ತ

ಕೊಳೆಯನ್ನು ಕ್ರಿಮಿಯನ್ನು
ಕೊಚ್ಚುತ್ತ ಕೊಲ್ಲುತ್ತ

ಕಾತುರದಿ ಕಾದಿರುವ
ಕರ್ಮಿಗೆ ಕರಗುತ್ತ

ಕರುಣಿಸಿದ ಕೊನೆಗೂ
ಕಣ್ಣೀರು ಕಳೆಯುತ್ತ

ಕವನ - 4 - ಬೆಳೆಸೋಣ ಭಾಷೆಯನು



ಪುರಾತನ ಸಂಗೀತಕೆ ಪುರಂದರರು ತಂದೆಯಣ್ಣ
ಪೋಣಿಸಿದರು ಸ್ವರಗಳನ್ನ ಮುತ್ತಿನಂಥ ಪದಗಳನ್ನ 
ನಿರತಸೇವೆಗೈದರಲ್ಲ ನಾಡ ಹಿರಿಯ ಕಬ್ಬಿಗರು
ಸತತಕಾಲ ದುಡಿದರಲ್ಲ ನುಡಿದುದಂತೆ ನಡೆದರು
ಮೌನದಿ ಕೃಷಿಗೈದರಣ್ಣ ಚಿತ್ರರಂಗ ಪುಟ್ಟಣ್ಣ
ವಿಶ್ವಖ್ಯಾತಿ ಪಡೆಯಿತಣ್ಣ ಕನ್ನಡ ಸಿನಿಮಾ ಬಣ್ಣ
ಜನರ ನಾಡಿ ಬಡಿತವರಿತು ಮಿಡಿದ ನಮ್ಮ ಸಾಹಿತಿಗಳು
ಸಾಂತ್ವನ ಸ್ಪೂರ್ತಿಯ ನೀಡುತ ಬರೆದರು ಸತ್ಕತೆಗಳು
ದ್ವೇಷಿಸದೆ ಪರಭಾಷೆಯನು ಬೆಳೆಸಿದರಿವರು ಕನ್ನಡವನು
ಸಕಲ ಭಾಷೆ ಸತ್ವ ಸವಿದು ಗಳಿಸಿದರಿವರು ಜ್ಞಾನವನು
ಅಂತಹುದೇ ಸತ್ಪಥವನು ಬಳಸುತ ಬೆಳೆಸುವ ಭಾಷೆಯ ಸಿರಿಯನ್ನು
ಅಭಿಮಾನವು ಈ ತಿಂಗಳಿಗಲ್ಲದೆ  ತಿಳಿಯುವ ನಡೆಯಿರಿ ನುಡಿಯನ್ನು

ಕವನ - 3 - ಚಲುವಿನ ಜಲಸಿರಿ - ಚೆನ್ನಗಿರಿ


ಚೆಲುವಿನ ಜಲಸಿರಿ
ನಯನ ಮನೋಹರಿ
ನೋಡಲೇ ಬೇಕು ಬನ್ನಿರಿ

ಸ್ಕಂದ ನಂದಿಯ ನಡುವೆ
ಸಸ್ಯ ಸಂಪತ್ತಿನ ಕಣಿವೆ
ವಿಧ ವೈಶಿಷ್ಟ್ಯಗಳೊಡನೆ
ಅವಳು ಅಪೂರ್ವ ಚೆಲುವೆ

ಅಲ್ಲಿನ ಜಲಪಾತ ಚೆನ್ನ
ಬೆಳ್ಳಿ ಬಾಣದಂತೆ ಸಣ್ಣ
ಜಳಜಳದ ಸದ್ದು ಎನ್ನ
ಕರ್ಣಕಿಂಪು ತಂಪಾಗಿಸುವುದು ಕಣ್ಣ

ಎತ್ತರದಿಂ ಹರಿದು
ಬೇರು ನಾರುಗಳ ಸವಿದು
ಬಂಡೆಕಾಂಡಗಳ ಕೊರೆದು
ನುಸುಳುವಳು ನಲಿದು

ಒಂದೆಡೆ ಜಾರುತ್ತಾ ಒಂದೆಡೆ ಚಿಮ್ಮುತ್ತ
ಅಲ್ಲೊಮ್ಮೆ ಇಲ್ಲೊಮ್ಮೆ ಮಲಗುತ್ತ ಬಳುಕುತ್ತ
ಮಣಿಯಂತೆ ಅಲ್ಲಿ ಬಲುರಭಸ ಇಲ್ಲಿ
ಫಳಫಳನೆ ಹೊಳೆಯುವಳು ರವಿಹೊನಲಿನಲ್ಲಿ


ಹಸಿರುಹಟ್ಟಿಯಲೇಳಿ
ಕಾಡುಕಟ್ಟೆಯ ಸೀಳಿ
ಪುಟಿಯುತ್ತ ಆಡುವಳೀ
ಜಲರಂಗಿನ ಹೋಳಿ

ತಾಗಿದರೆ ತಣಿಸುವಳು
ಸೋಕಿದರೆ ಸೆಳೆಯುವಳು
ನೆಂದರೆ ನಗಿಸುವಳು
ಮಿಂದರೆ ಎಲ್ಲ ಮರೆಸುವಳು

ನೋಡಿ ಬಂದರೆ ನೆನೆಯದಿರಲಾರೆವು
ಆಡಿ ಬಂದರೆ  ಹಾಡದಿರಲಾರೆವು

ಕವನ – 2 - ದೂರುತ್ತ ಕಾಲ ಕಳೀಬೇಡಿ


ಅಡುಗೆ ಮನೆಗೆ ಹೆಣ್ಣು ಮಾತ್ರ ಮೀಸಲಾ
ನಳಪಾಕ ನಮದು ಎಂದೆ ಬೀಗುತ್ತೀರಲ್ಲ
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಕಾಲಧರ್ಮವನ್ನು ಯಾರು ತಡೆಯೋರು

ನಿಮ್ಮ ಕೆಲಸಾನ ನೀವೆ ಮಾಡ್ಕೊಳ್ಳಿ
ಇಲ್ದಿದ್ರೆ ಉಪವಾಸ ವನವಾಸ ರೀ
ಹಾಡುತ್ತ ದೂರುತ್ತ ಸುಮ್ನೆ ಕಾಲ ಕಳೀಬೇಡಿ

ಫೋನು ಹಿಡಿದು ಲೀನವಾದ್ರೆ ನೀವು
ಫ್ಯಾನು ಹಾಕಿ ತಿನಿಸಿ ತೊಳಿಬೇಕೇನು
ಬೈಕಿನಲ್ಲಿ  ಸುತ್ತಿ ಬಂದ್ರೆ ನೀವು
ಸ್ಲೈಸುನೀಡಿ ಪಾದ ಒತ್ತಬೇಕೇನು

ಫ್ರೆಂಡ್ಸು ಕ್ರಿಕೆಟ್ಟು ಎಲ್ಲಾನು ಬಿಟ್ಟು
ಮನೆ ಕಡೆ ನೋಡಿ ಸ್ವಲ್ಪ ಕಣ್ಬಿಟ್ಟು
ಇಲ್ಲಾಂದ್ರೆ ಕಾದಿದೆ ಎಡವಟ್ಟು

ಹೆಣ್ಣುಹೊರಗೂ ಒಳಗೂ ದುಡಿದೂ ದುಡಿದೂ
ಮೋಜು ನಿಮ್ಮದು ಕುಡಿದು ಕುಡಿದೂ
ಕಡಿದು ಕಟ್ಟೆಹಾಕೋದು ಏನಿಲ್ಲ ನಿಮ್ದು

ಒಲೆಯ ಭೋಜನ ಬಯಸುವ ನೀವು
ಒರಳುರುಬ್ಬಿ ಕೊಡಿ ನಷ್ಟವೇನು
ಪೂಜೆ ಭಜನೆ ನಿತ್ಯ ಬೇಕೇನು
ಪಾತ್ರೆ ಉಜ್ಜಿ ನೆಲವ ಒರೆಸಿ ತಪ್ಪೇನು

ಅಕ್ಕಿಮೇಲಾಸೆ ನೆಂಟ್ರಮೇಲೆ ಪ್ರೀತಿ
ಸಿಗುವುದೊಂದೆ ನೀ ತಿಳಿ ಸರಿ ರೀತಿ
ಇಲ್ಲಾಂದ್ರೆ ಫಜೀತಿ

ಆಚಾರ ವಿಚಾರ ಹೆಣ್ಣೊಬ್ಬಳಿಗಲ್ಲ
ಸಂಗೀತ ಸಾಹಿತ್ಯಕೆ ಬಿಡುವೇ ಇಲ್ಲ
ನಿಮ್ಮಂತೆ ಅವಳೂನು ಹತ್ತು ತಲೆಕೈಗಳಿಲ್ಲ

ಕವನ 1 - ಭಾಳ ಒಳ್ಳೇವ್ರು ನಮ್ಮಿಸ್ಸು



ಭಾಳ ಒಳ್ಳೇವ್ರು ನಮ್ಮಿಸ್ಸು
ಕೋಪಮಾತ್ರ ತುಸು ಹೆಚ್ಚು
ತಪ್ಪಿಗೆ ಬೈತ ಒಪ್ಪಿಗೆ ಒಪ್ತಾ
ಅವರೇ ನಮ್ಮ ಫೇವರಿಟ್ಟು||||

ಮೊಗವೋ ಬೆಳ್ಳಿಚಂದಿರ
ನಗುವೋ ಒಳ್ಳೆ ಸುಂದರ
ಕಣ್ಣಲಿ ಒಲವಿನ ಹೊಳಪದು ಇಂಗದು
ಮನ ನಿಷ್ಕಲ್ಮಷ ಮಂದಿರ

ಕ್ಲೀನು ಕ್ಲೀನು ಅಂತಾರೆ
ಕ್ಲೀನಲ್ಲಾಂದ್ರೆ ಕೆರಳ್ತಾರೆ
ತಾವು ಪಾಲಿಸಿ ನಮಗೂ ಕಲಿಸಿ
ಹೈಜೀನ್ ಗೆ ಜೈ ಅಂತಾರೆ

ಮಕ್ಕಳ ಜೊತೆ ಮಗುವಾಗ್ತಾರೆ
ಚಂದಮಾಮ ಕಥೆ ಹೇಳ್ತಾರೆ
ಉಡುಗೊರೆ ಆಟಿಕೆ ತಂದುಕೊಡುತಾ
ಇವರೆ ಸಾಂಟಾ ಕ್ಲಾಸ್ ಆಗ್ತಾರೆ

ಸಂಘ ಸಮಾಜ ಕಟ್ತಾರೆ
ಹೆಣ್ಣಿನ ಕಷ್ಟಕೆ ಆಗ್ತಾರೆ
ಹೆಣ್ಣಿಗೆ ಧೈರ್ಯ ಸ್ಥೈರ್ಯವ ತುಂಬಿ
ಮುನ್ನಗ್ಗಲು ಜೊತೆಯಾಗ್ತಾರೆ

ಎಲ್ಲರನ್ನೊಂದು ಮಾಡ್ತಾರೆ
ನಾಯಕಿಯಾಗಿ ನಡೆಸ್ತಾರೆ
ನಮ್ಮಲ್ಲಿರುವ ಕಲೆಯನು ಗುರುತಿಸಿ
ಗುರಿ ಮುಟ್ಟಲು ನೆರವಾಗ್ತಾರೆ

ನ್ಯಾಯಕೆ ತಲೆಯ ಬಾಗ್ತಾರೆ
ಅನ್ಯಾಯಕೆ ಸಿಡಿದು ನಿಲ್ತಾರೆ
ಯಾರೆ ಅಡ್ಡಿ ಬಂದರೂ ಹೆದರದೆ
ಬಿಡದೆ ಹೋರಾಟ ಮಾಡ್ತಾರೆ

ಅವರೆಲ್ಲಿದ್ದರೆ ಅಲ್ಲೆ ಚರ್ಚೆ
ಬಹು ವಿಷಯಗಳಾ ವಿಮರ್ಶೆ
ಕಲಿಯಲು ಕಲಿಸಲು ಸರ್ವದಾಸಿದ್ಧ
ಮನೆಯೋ ಅವರದು ಪುಸ್ತಕ ಪರಿಶೆ

ಬಾಲ್ಯದಿಂದಲೂ ಕ್ರಾಂತಿಯ ಹಾದಿ
ರಕ್ತಕೂ ಧರ್ಮಕು ಅಂಟದ ಜಾತಿ
ಭಾಳ ಕಲಿತೆವು ಬಾಳನು ಅರಿತೆವು
ಮನಕನಿಸಿಸುದ ಮಾಡಲು ಇಲ್ಲ ಭೀತಿ

ವಾಟ್ಸಾಪ್ ನಲ್ಲು ಬೆಸೆದರು ಕೊಂಡಿ
ಮಾಡಿದರಿದನು ಕಲಿಕಾಬಂಡಿ
ಗಣಿತ ವಿಜ್ಞಾನ ಸಮಾಜ ವಿಸ್ಮಯ
ಜ್ಞಾನದ ಹಸಿವಿಗೆ ದೊರೆವುದು ತಿಂಡಿ!!