Sunday, 18 September 2016

ಕವನ - 10 - ನಾ ಹೆಂಗ ಕಾಲಕ್ಕೆ ಬರಲವ್ವ -


ಬಿತ್ತಾಗ ಬರಲಿಲ್ಲ
ಮೊಳೆತಾಗ್ಲೂ ಸುಳಿವಿಲ್ಲ
ಅಳಿದುಳಿದ ಫಸಲೆಲ್ಲಾ
ಕೈ ಸೇರೊ ಹೊತ್ತಲ್ಲಿ
ಬರಬರನೆ ಬಿದ್ಯಲ್ಲೋ ಮಳೆರಾಯ
ಬೆಳೆಯೆಲ್ಲ ಮಣ್ಣಾಯ್ತೊ ಮಳೆರಾಯ

ವನಹಸಿರು ಕಳುವಾಯ್ತು
ಬಿಸಿ ಏರುಪೇರಾಯ್ತು
ಬೀಸೊ ಗಾಳೀಗಂತು
ದಿಕ್ಕೆಟ್ಟು ತಪ್ಪೋಯ್ತು
ನಾ ಹೆಂಗ ಕಾಲಕ್ಕೆ ಬರಲವ್ವ
ಯಾರ ಹೊಣೆ ನೀನೆ ಹೇಳವ್ವ

ಬಂದರೆ ಅತಿವೃಷ್ಟಿ
ಇಲ್ಲ ಅನಾವೃಷ್ಟಿ
ಮನೆಯೊಳಗ ನುಗ್ಗಿ
ನಗರವೇ ಮುಳುಗಿ
ಯಾಕಿಂಥ ಕಡು ಕಷ್ಟ ಕೊಡುತೀಯೊ
ಯಮಲೋಕಕೆ ಯಾಕ ದೂಡುತೀಯೊ

 ಕೆರೆಯಾಗ ಮನೆಕಟ್ಟಿ
ಕಪ್ಪು ಟಾರನು ಮೆತ್ತಿ
ಇಂಗಿಸುವ ಉಸುಕನ್ನು
ಮಂಗಮಾಯವಗೊಳಿಸಿ
ಬಿದ್ದುನಾನೆತ್ತೋಗಲೇ ಅಮ್ಮ
ಎದ್ದು ತಿದ್ದುವ ಸರತಿ ನಿಮದಮ್ಮ




ಕವನ - 9 - ಚಳಿಗವನಗಳು


1. ಮುದುಡಿ  ಮುದುಡಿ
ಮೈ ,ಮನಸು
ಎರಡೂ
ಮರಗಟ್ಟಿ ಮರುಗಿದೆ

ಬಿಡದೆ ತಡಿಯದೆ
ಬರುವ
ಜಡಿ ಮಳೆ ಕಷ್ಟಗಳಿಗೆ
ಬೆಚ್ಚನೆಯ ಭಾನು
ಬಯಸಿದೆ
ಕಾಯಾ ಮನಸಾ
ತಪಿಸಿದೆ
  
2. ನಡುಗಿಸುವ ಚಳಿ
ಖಾರದ ಬಿಸಿ ತಿನಿಸುಗಳ
ಮೆಲ್ಲುವ ಖಯಾಲಿ,
ಸುಡುವ ಕಾಫೀಲಿ
ಏಳುವ ಹಬೆಯೂ
ಹೀರಿದ ಮೇಲೆ
ಖಾಲಿ ಕಪ್ಪಿನ ಬಿಸಿಯೂ
ಅಪ್ಪುತ
ಕೈ ಕಾಯಿಸಿಕೊಳ್ಳುವ
ಪಾಡು
ಹಲ್ಲಿನ ಕಟಕಟ ತಾಳಕೆ
ಚಳಿಚಳಿ ತಾಳೆನು ಹಾಡು


 3)
ಎರಡೆರಡು
ಹೊದಿಕೆಗಳ ಗೂಡಲಿ
ಗುಬ್ಬಿಯಾಗಿ

ಮೆತ್ತನೆ ದಿಂಬನು
ಗಟ್ಟಿಯಾಗಿ ಅಪ್ಪತಲೀ
ಬೆಚ್ಚಗಾಗಿ

ಅಮ್ಮನ ಮಡಿಲು
ಅಜ್ಜಿಯ ಬಾಚುವ ಬೆರಳು
ನೆನಪಾಗಿ

ಬಾಲ್ಯದ ಒಲೆಯು
ನಿಗಿನಿಗಿ ಉರಿಯುತಾ
ಕಣ್ಮುಂದೆ ಹರಿದಾಡಿ

ಮಳೆಯ ಜೋಗುಳ
ಧೀರ್ಘ ರಾತ್ರಿಯು
ನಿದ್ದೆಗೆ ವರವಾಗಿ

ಬರುವ ಮಳೆರಾಯ
ಕೊರೆವ ಚಳಿಗಾಳಿಗೆ

ಏನೆನ್ನಲಿ 

ಕವನ - 8 - ಇಂಗದ ರಕ್ತದಾಹ


ಅಲ್ಲಾಹು ಇದ್ದಿದ್ದರೆ ಇದ ಮಾಡಗೊಡುತ್ತಿರಲಿಲ್ಲ
ಜೀಸಸ್ ...ಪಾಪಿಗಳನ್ನು ಕ್ಷಮಿಸಿದ
ತನ್ನ ಮಕ್ಕಳಿಗೇಕೆ ರಕ್ಷಣೆಯನ್ನೀಯಲಿಲ್ಲ
ಕೋಟಿಕೋಟಿ ಹಿಂದೂ ದೇವತೆಗಳಿಗೆ
ಭಾರತದಲ್ಲೇ ಬಿಲಿಯನ್ ಸಮಸ್ಯೆಗಳು
 ಕ್ಷಮಿಸಿ.......ಅವರಿಗೆ ಬಿಡುವಿಲ್ಲ

ಖುರಾನ್  ದೇವರೆ ನೀನು
ದಯೆಗೇ ದಯಸ್ವರೂಪಿಯಂತೆ
ನಿನ್ನ ಕೃಪಾಕಟಾಕ್ಷ ಬಯಸಿದವರಿಗೆ
ಮೃತರಿಗೂ ಜೀವ ನೀಡುವಿಯಂತೆ

ನಿನಗೆ ಬಾಗಿ ಜಗವೆಲ್ಲ ಈಗ ಪ್ರಾರ್ಥಿಸುವುದು
ನೀನೊಬ್ಬನೇ ದಿಕ್ಕೆಂದು ನಂಬುವುದು
ಬರುವುದೋ ಹೋದ ಜೀವ
ಅಳಿಸುವೆಯಾ ಕಳಕೊಂಡವರ ನೋವ

ನಾನೇಕೆ ಸತ್ತೆನೆಂದೇ ತಿಳಿಯದವ
ಪ್ರಶ್ನೆ ಹುಟ್ಟಲೂ ಮುಂಚೆ ಪ್ರಾಣ ಪಕ್ಷಿ
ಹಾರಿ ಹೋಗಿ ಎಲ್ಲರನ್ನು ತೊರೆದವ
ಅವನ ಅರೆತೆರದ ಅಕ್ಷಿ ಕುಕೃತ್ಯದ ಸಾಕ್ಷಿ

ದೇವರ ಹೆಸರಲ್ಲಿ ಮೃಗದ ರಕ್ತದಾಹ
ಮನುಕುಲದ ನಾಶಕ್ಕೆ ಹರಡುತಿಹ
ಮತೀಯ ಮತ್ತಿನ ಮೋಹ
ಹಿರಿಯರ ತ್ಯಾಗಕ್ಕೆ ವ್ಯವಸ್ಥಿತ ದ್ರೋಹ

ಇನ್ನೆಷ್ಟು ದಿನ ಅವರ ಹಟ
ಬುಡ ಸಹಿತ ಕೀಳಲು
ಮತ್ತೆ ಮೊಳೆಯದಿರಲು
ಒಗ್ಗಟ್ಟಿನ ಹೆಜ್ಜೆ ಬೇಕು ದಿಟ

ವಿಶ್ವ ಯುದ್ಧ ನಡೆಯಲಿ
ಉಗ್ರರ ವಿರುದ್ಧ
ಇದಕೂ ಮೊದಲಿರಲಿ

ನಾವೆಲ್ಲ ಒಂದೆ ಎಂಬ ಮಾತಿಗೆ ಬದ್ಧ

ಕವನ - 7 - ಗೆಳತಿ...ನಿನಗೊಂದು ಪತ್ರ



ಆಕಸ್ಮಿಕವೋ ಅದೃಷ್ಟವೋ
ಆಗ ನೀ ಬಂದೆ ಬಳಿಗೆ
ಯಾರೂ ತೋರಿಸದ ಹಾಗೆ
ಸ್ನೇಹವ ರುಚಿಸಿದೆ ನನಗೆ

ಮೊದಲು ಅರಿವಾಗಲಿಲ್ಲ ಮನಸಿಗೆ
ಬರುತ್ತ ನಿನ್ನ ಬಿಡಲಾರದಾದೆ
ನೀ ಹಚ್ಚಿಕೊಳ್ಳುವ ಬಗೆ ಮುಗ್ಧ ನಗೆ
ಎಲ್ಲಕ್ಕೂ  ನಾ ಮರುಳಾದೆ

 ಶುಭಾಶಯ ಇರಲಿ ಗ್ರೀಟಿಂಗ್ ಕಾರ್ಡಿರಲಿ
ಹೊಸಬಟ್ಟೆ ಧರಿಸಿರಲಿ
ಮೊದಲ ಫೋನ್ ಕಾಲ್ ಇರಲಿ
ಎಲ್ಲವೂ ಆಶಿಸುತ್ತಿದ್ದೆವು ಮೊದಲಿರಲಿ

ಶಾಲೆಗೆ ನೀ ಬರದಿರೆ ನಾನೂ ಇಲ್ಲ
ನಾ ಬಂದರೆ ನೀ ತಪ್ಪುವುದಿಲ್ಲ
ಒಂದೆ ಬಣ್ಣದ ಉಡುಪು
ಒಂದೆ ರೀತಿಯ ಜಡೆ ಒನಪು
ಕೊಂಡರೂ ಒಂದೇ
ತಿಂದರೂ ಒಂದೆ
ನೆನಪಿದೆಯಾ ನಮ್ಮಿಬ್ಬರ ನೋಡಿ
ಶಿಕ್ಷಕರೆಂದಿದ್ದರು ಇಬ್ಬರೂ ಕೂಡಿ
ಹಾಕಿಕೊಳ್ಳಿರಿ ಬೆನ್ನಿಗೆ
ಒಂದು ಲೋಹದ ಬೆಸುಗೆ

ಹಬ್ಬಕ್ಕೆ ನಿಮ್ಮನೆಯ ಉಸ್ಲಿಗಾಗಿ
ಒಮ್ಮೊಮ್ಮೆ ನಮ್ಮನೆ ಖಾರದ ಸಾಂಬಾರಿಗಾಗಿ
ಇಬ್ಬರೂ ಚಪ್ಪರಿಸುತ್ತಿದ್ದ  ದಿನಗಳಿಗಾಗಿ
ಖುಷಿಪಡುವೆ ಮಗುವಂತೆ... ನೆನಪಾಗಿ

ಕ್ಲಾಸಿಗೆ ಮೊದಲಿರುತ್ತಿದ್ದ ನಾವು
ಒಂದು ಸಾರಿ ಗಣಿತದಲ್ಲಿ ಸೊನ್ನೆ ಪಡೆದೆವು
ಬೆಂಚ್ ಹತ್ತಿ ನಿಂತುಚರಿತ್ರೆ ಸೃಷ್ಠಿಸಿದೆವು
ದುಃಖದ ಮುಖವಾಡ ಹೊತ್ತಿದ್ದೆವು
ಎಷ್ಟೊತ್ತು ನಾಟಕವಾಡುವೆವು
ಒಬ್ಬರಿಗೊಬ್ಬರು ಮುಖನೋಡಿಕೊಂಡೆವು
ಉಕ್ಕಿಬಂದ ನಗುವನ್ನು ತಡೆಯಲಾರದಾದೆವು
ಉರಿದ ಶಿಕ್ಷಕರು ಹೊರಗೆ ನಿಲ್ಲಿಸಿದಾಗ
ಆದ ಅಪರೂಪದ ಅನುಭವವ
ಈಗಲೂ ಮರೆಯಲಾರೆವು

ನಿನ್ನಲ್ಲಿರುವ ಕಲೆ ಹಲವು ಬಗೆ
ನೀನಿರುವೆಡೆಯೆಲ್ಲ ಹಾಸ್ಯಹೊನಲಿನ ಬುಗ್ಗೆ
ಥೇಟ್! ಅನುಕರಿಸುವ ಕಲಾವಿದೆ
ಗಿಳಿಮಾತನು ಕೇಳುತ್ತಿರಲೇಬೇಕು ಅನಿಸುತ್ತದೆ

ಹಾಡಿದರೆ ಹಾಯೆನಿಸುವ
ಮಧುರಕಂಠ ಹೊಂದಿರುವ
ಸುಮನಸಿನ ರೂಪಸಿ
ಕಮಲಗಣ್ಣಿನ ಅರಸಿ

ನಿನ್ನೊಂದಿಗಿನ ಕ್ಷಣಗಳು
ಸಂತಸದ ದಿನಗಳು
ಕಲಿತೆ ಕೊಡುವುದನು
ಅರಿತೆ ಪ್ರೀತಿಸುವುದನು
ನೀ ತಂದ ದೊಡ್ಡ ಉಡುಗೊರೆ
ನಿನ್ನ ಮಿಸ್ಸಮ್ಮನ ಪರಿಚಿಯಿಸಿ
ಜೀವನದಲ್ಲಿ ತಂದೆ ತಿರುವಿನಗೆರೆ

ನೋವು ನಲಿವುಗಳ ಸಂಗಾತಿ
ಸದಾ ಜೊತೆಯಿರೆಂದು ಕೋರುವ ನಿನ್ನ ಗೆಳತಿ


ಕವನ - 6 - ಬಣ್ಣಕ್ಕೂ ಇಟ್ಟರೆ....? ಕುಮ್ಮಕ್ಕು



ಅಂಧ ದ್ವೇಷದ ವೈಖರಿ ನೋಡಿ
ಪ್ರಾಣಿ ಹರಾಜು ನಡೀತಿದೆ ಹೊಡೆದಾಡಿ
ಆಕಳು ಹಿಂದುಗಳ ಪಕ್ಷ
ಅಜವು ಇಸ್ಲಾಮರ ಸಮಕ್ಷ

ಮಂದಿರದಲ್ಲಿ ಹಿಂದುಗಳು
ಮಸೀದಿಯಲ್ಲಿ ಮುಸ್ಲಿಮರು
ಆಗಿರುತ್ತಿದ್ದ ಕಾಲ ಹೋಗಿ
ಭಾರತ ಹರಿದು ಇಬ್ಭಾಗವಾಗಿ
ಮನುಷ್ಯರೇ ಇಲ್ಲದಂತಾಗಿ

ಅವರು ನಾರಿಫಲಕ್ಕೂಇವರೂ ಖರ್ಜೂರಕ್ಕೂ ಮುಗಿಬಿದ್ದುದ ಕಂಡು
ಈಗ ಚಿಂತೆಯಾಗಿದೆ ಮರ ಎಲೆ ಕಡ್ಡಿ ಗಳಿಗೂ
ನಮ್ಮ ಸರದಿಯೆಂದು? ...ಎಂದು

ಈ ವರಸೆ ಎಲ್ಲಿವರೆಗೂ ಅಂದರೆ
ಬಣ್ಣಗಳಿಗೂ ಬಂತು ತೊಂದರೆ
ಹಸಿರಾಯಿತು ಮುಸಲ್ಮಾನ
ಹಿಂದುಬಳಿದುಕೊಂಡ ಕೇಸರೀನ

ಆ ದಿನ ದೂರದಲ್ಲೆಲ್ಲೂ ಇಲ್ಲ
ಇಸ್ಲಾಂಪರ ಹಸಿತರಕಾರಿಯೆಲ್ಲ
ಬರೀ ಟಮೋಟ ಬಿಟ್ಟರೆ ಗಜ್ಜರಿ
ಹಿಂದುಗಳ ಹಿಸ್ಸೆಗೆ ಉಳಿಯುವುದಲ್ಲ

ಖರೆ ಮೇಲಿನದೆಲ್ಲ
ಆದ್ರೆ ಒಂದು ಹೊಳೀತಿಲ್ಲ
ಪಪ್ಪಾಯಕಲ್ಲಂಗಡಿ
ಸೇರಬೇಕು ಯಾರ ಗಡಿ?
ಈ ಬಡಪಾಯಿಯೋ ಹೊರಗೆ ಮುಸಲ್ಮಾನ
ಒಳಗೆ ಒಬ್ಬ ಹಿಂದು ಇದ್ದಾನ......
ಇವರು ಗೋಮಾಂಸದ ಪಾರ್ಟಿ ಮಾಡುವರಂತೆ
ಅವರು ಮಸೀದಿ ಮುಂದೆ ಹಂದಿ ಸಮಾರಾಧನೆಯಂತೆ
ಅಲ್ಲೆಲ್ಲೊ ಒಲೆಯೇ ಉರಿಯದ ಮನೆಗಳಿವೆಯಂತೆ
ಇಲ್ಲಿ ಬಾಯಿ ಬಡಕೊಳ್ಳುವವರು
ಅಲ್ಲಿ  ಈ ಖಾದ್ಯ ಬಡಿಸಿ ಬಂದರೆ ಪುಣ್ಯವಂತೆ
ತ್ವರೆಮಾಡಿ

ಕವನ - 5 - ಕರ್ಮೋಡ


ಕರ್ಮೋಡ ಕವಿದಾಗ
ಕಡುಕತ್ತಲಾದಾಗ

ಕಣ್ಣು ಕಂಡಲ್ಲೆಲ್ಲ
ಕಪ್ಪು ಕಳೆ ಇಳೆಗೆಲ್ಲ

ಕೆಳಗಿಳಿದ ಕರಿಮೇಘ
ಕಾರುತ್ತ ಕಾರುತ್ತ

ಕೆಳತೋಟಕೆಲ್ಲ
ಕಾಯುತ್ತ ಕಾಯುತ್ತ

ಕೊಳೆಯನ್ನು ಕ್ರಿಮಿಯನ್ನು
ಕೊಚ್ಚುತ್ತ ಕೊಲ್ಲುತ್ತ

ಕಾತುರದಿ ಕಾದಿರುವ
ಕರ್ಮಿಗೆ ಕರಗುತ್ತ

ಕರುಣಿಸಿದ ಕೊನೆಗೂ
ಕಣ್ಣೀರು ಕಳೆಯುತ್ತ

ಕವನ - 4 - ಬೆಳೆಸೋಣ ಭಾಷೆಯನು



ಪುರಾತನ ಸಂಗೀತಕೆ ಪುರಂದರರು ತಂದೆಯಣ್ಣ
ಪೋಣಿಸಿದರು ಸ್ವರಗಳನ್ನ ಮುತ್ತಿನಂಥ ಪದಗಳನ್ನ 
ನಿರತಸೇವೆಗೈದರಲ್ಲ ನಾಡ ಹಿರಿಯ ಕಬ್ಬಿಗರು
ಸತತಕಾಲ ದುಡಿದರಲ್ಲ ನುಡಿದುದಂತೆ ನಡೆದರು
ಮೌನದಿ ಕೃಷಿಗೈದರಣ್ಣ ಚಿತ್ರರಂಗ ಪುಟ್ಟಣ್ಣ
ವಿಶ್ವಖ್ಯಾತಿ ಪಡೆಯಿತಣ್ಣ ಕನ್ನಡ ಸಿನಿಮಾ ಬಣ್ಣ
ಜನರ ನಾಡಿ ಬಡಿತವರಿತು ಮಿಡಿದ ನಮ್ಮ ಸಾಹಿತಿಗಳು
ಸಾಂತ್ವನ ಸ್ಪೂರ್ತಿಯ ನೀಡುತ ಬರೆದರು ಸತ್ಕತೆಗಳು
ದ್ವೇಷಿಸದೆ ಪರಭಾಷೆಯನು ಬೆಳೆಸಿದರಿವರು ಕನ್ನಡವನು
ಸಕಲ ಭಾಷೆ ಸತ್ವ ಸವಿದು ಗಳಿಸಿದರಿವರು ಜ್ಞಾನವನು
ಅಂತಹುದೇ ಸತ್ಪಥವನು ಬಳಸುತ ಬೆಳೆಸುವ ಭಾಷೆಯ ಸಿರಿಯನ್ನು
ಅಭಿಮಾನವು ಈ ತಿಂಗಳಿಗಲ್ಲದೆ  ತಿಳಿಯುವ ನಡೆಯಿರಿ ನುಡಿಯನ್ನು